ಅಂದ ಹಾಗೆ ಜೊತೆಯಲ್ಲಿರುವ ವ್ಯಕ್ತಿ-ವಿಜ್ಞಾನಿಯ ಹೆಸರು ಪ್ರೊಫೆಸರ್ ಬುರ್ಕಾರ್ಡ್ ಕೋನೀಗ್(Prof. Dr. Burkhard Konig). ನನ್ನ ಸಂಶೋಧನೆಯ ಪ್ರಮುಖ ವಿಷಯವಾಗಿರುವ "ವರ್ಣ" ಗಳ ಮೇಲೆ ಅತ್ಯಂತ ಹೆಚ್ಚು ವೈಜ್ಞಾನಿಕ ಪ್ರಭಂದಗಳನ್ನು ಮಂಡಿಸಿ, ಅದನ್ನು ಪ್ರಾಯೋಗಿಕವಾಗಿ, ಸಮರ್ಥವಾಗಿ ವಿವರಿಸಿ ವೈಜ್ಞಾನಿಕ ಸಮೂಹದಲ್ಲಿ ಗುರುತಿಸಿಕೊಂಡವರು. ವರ್ಣಗಳೆಂದರೆ ಸಾಮಾನ್ಯವಾದ ವರ್ಣಗಳಲ್ಲ. ಮನುಷ್ಯನ ದೇಹದ ರಚನೆಯ ಮೂಲಕಾರಣವಾಗಿರುವ DNA ಗಳಿಗೆ ಬಣ್ಣ ಹಾಕುವ, ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಆಯ್ದು ನಾಶಮಾಡುವ, ಮಾರಕ ರೋಗಗಳಿಗೆ ರಾಮಭಾಣವಾಗಬಲ್ಲ, ಮುಂದಿನ ಪೀಳಿಗೆಗೆ ಅತ್ಯವಶ್ಯವಾದ ಅತ್ಯಂತ ಚಂದದ ಬಣ್ಣಗಳು ಅವು. ಹೇರಳವಾಗಿ, ಉಚಿತವಾಗಿ ಸಿಗುವ ಸೂರ್ಯನ ಬೆಳಕಿನಿಂದ ರಾಸಾಯನಿಕ ಕ್ರಿಯೆಗಳನ್ನು ನಡೆಸಬಹುದು ಎಂದು ತೋರಿಸಿಕೊಟ್ಟವರು. 2011 ರಲ್ಲಿ ಆತನ ಸಂಶೋಧನಾ ತಂಡವನ್ನು ಸೇರುವ ಉದ್ದೇಶದಿಂದ ಒಂದು ಪತ್ರವನ್ನು ಬರೆದಿದ್ದೆ. ಅದಕ್ಕೆ ಆತ ಉತ್ತರ ಕೊಟ್ಟಿದ್ದರೂ, ಯೋಜನೆಗೆ ಸೂಕ್ತ ಅನುದಾನವಿಲ್ಲದೆ ಆ ಆಸೆಯನ್ನು ಕೈಬಿಡಬೇಕಾಗಿತ್ತು. ಆದರೂ ಆತನಿಗೆ ಪತ್ರ ಬರೆಯುವುದನ್ನು ನಿಲ್ಲಿಸಿರಲಿಲ್ಲ.
ಮೊನ್ನೆ ಲಿಬ್ಲಿಸೆ(Liblice 2015 http://en.liblice2015.cz/) ಎನ್ನುವ ವೈಜ್ಞಾನಿಕ ಸಮ್ಮೇಳನ ನಡೆಯುತ್ತಿರುವುದಾಗಿ ಮಾಹಿತಿ ಸಿಕ್ಕಿತು. ಅದು ಕೂಡ ಚೆಕ್ ಗಣರಾಜ್ಯದ ಓಲೋಮೋಸ್ ನಲ್ಲಿ. ಅಲ್ಲಿ ಈತನ ಜೊತೆ ಒಂದಷ್ಟು ಹರಟುವ ಅವಕಾಶ ಸಿಕ್ಕಿತು. ವೈಜ್ಞಾನಿಕ ಸಮುದಾಯದಲ್ಲಿ ಭಾರತೀಯರೆಂದರೆ ಅದ್ಯಾಕೋ ಎಲ್ಲರಿಗೂ ಬಹಳ ಇಷ್ಟ. ನಾನು ಭಾರತೀಯ, ನಿಮಗೆ ಪತ್ರವನ್ನೂ ಬರೆದಿದ್ದೆ ಎಂದು ನೆನಪಿಸಿದೆ. ಭಾರತೀಯ ವಿಜ್ಜಾನ ಮಂದಿರ, ಬೆಂಗಳೂರು(Indian Institute of Science, Bangalore). ಇಲ್ಲಿರುವ ಬಹುತೇಕ ವಿಜ್ಞಾನಿಗಳು ಇವರಿಗೆ ಪರಿಚಿತರು. ನಾನು ಕೂಡ ಇದೆ ಸಂಸ್ಥೆ ಯಲ್ಲಿ ಕೆಲಸ ಮಾಡಿರುವುದರಿಂದ ಆತ್ಮೀಯತೆ ಒಂದಷ್ಟು ಹೆಚ್ಚಾದದ್ದು ನಿಜ. "ಜರ್ಮನಿ ಗೆ ಬಂದರೆ ತನ್ನ ಪ್ರಯೋಗಾಲಯಕ್ಕೆ ಭೇಟಿ ಕೊಡಬಹುದು ಎಂಬ ಆಮಂತ್ರಣ ಕೂಡ ಸಿಕ್ಕಿತು". ಇದೊಂದೇ ಮಾತನ್ನು ಕೇಳಲು ಅದೆಷ್ಟು ದಿನಗಳಿಂದ ಕಾದು ಕುಳಿತಿದ್ದೆ ನಾನು. ಖುಷಿಯಿಂದ ಕುಣಿದಾಡಬೇಕೆನಿಸಿತು.
ನಮ್ಮಿಬ್ಬರ ಹಿಂದಿರುವುದು ಈ ವೈಜ್ಞಾನಿಕ ಸಮ್ಮೇಳನದಲ್ಲಿ ನಾನು ಪ್ರಸ್ತುತ ಪಡಿಸಿದ ನನ್ನ ಸಂಶೋಧನೆಯನ್ನುಸಂಕ್ಷಿಪ್ತವಾಗಿ ವಿವರಿಸುವ ಪೋಸ್ಟರ್. ಪ್ರೊಫೆಸ್ಸರ್ ಕೋನೀಗ್ ಬಗೆಗಿನ ಹೆಚ್ಚಿನ ಮಾಹಿತಿಗೆ ಆತನ ವೆಬ್ಸೈಟ್ ಭೇಟಿ ನೀಡಿ. ಇಲ್ಲಿದೆ ಕೊಂಡಿ http://www-oc.chemie.uni-regensburg.de/koenig/